ಊರ್ಮಿಳೆ
	ಲಕ್ಷ್ಮಣನ ಸತಿ. ಜನಕರಾಜನ ಔರಸಪುತ್ರಿ. ವಾಸ್ತವವಾಗಿ ಇವಳು ಜಾನಕಿ; ಆದರೆ ಆ ಹೆಸರಿನಿಂದ ಪ್ರಸಿದ್ಧವಾದವಳು, ಜನಕರಾಜನ ಸಾಕುಮಗಳು ಸೀತೆ. ರಾಮಲಕ್ಷ್ಮಣರಿಗೆ ಸೀತಾ ಊರ್ಮಿಳೆಯರು ಧರ್ಮಸಂಬಂಧ ಸದೃಶರಾಗಿ, ಸದೃಶರೂಪಸಂಪದರಾಗಿ ಇದ್ದಾರೆಂದು ಋಷಿ ವಿಶ್ವಾಮಿತ್ರನೇ ಜನಕರಾಜನಿಗೆ ಹೇಳಿ ಅವರ ಮದುವೆಯನ್ನು ನಿರ್ಧರಿಸುತ್ತಾನೆ. ಸೀತಾದೇವಿಯನ್ನು ಶ್ರೀರಾಮನಿಗೆ ಧಾರೆಯೆರೆದ ಕೈಯಲ್ಲೇ ಅದೇ ರೀತಿಯಲ್ಲೇ ಜನಕರಾಜ ಊರ್ಮಿಳೆಯನ್ನು ಲಕ್ಷ್ಮಣನಿಗೆ ಧಾರೆಯೆರೆಯುತ್ತಾನೆ- ಲಕ್ಷ್ಮಣಾಗಚ್ಛ. ಭದ್ರಂತೆ! ಊರ್ಮಿಲಾಮುದ್ಯತಾಂ ಮಯಾ. ಪ್ರತೀಚ್ಛ ಪಾಣಿಂ ಗೃಹ್ಣೀಷ್ವ; ಮಾಭೂತ್ ಕಾಲಸ್ಯ ಪರ್ಯಯ:! ಎಂದು. ಮುಂದೆ ತನ್ನೊಡನೆ ವನವಾಸಕ್ಕೆ ಬರುತ್ತಿರುವ ಲಕ್ಷ್ಮಣನಿಗೆ ರಾಮ ಹೇಳುತ್ತಾನೆ. ನಿನ್ನ ಮನದನ್ನೆಯರಿಗೆಲ್ಲ ಹೇಳಿಬಿಟ್ಟು ಬಾ ಎಂದು! ಪ್ರಾಯಶಃ ವಾಲ್ಮೀಕಿ ಇಲ್ಲಿ ಊರ್ಮಿಳೆಯನ್ನು ಗಮನದಲ್ಲಿಟ್ಟುಕೊಂಡಿರಬೇಕು. ರಾಮಲಕ್ಷ್ಮಣ ಸೀತೆಯರು ವನವಾಸವನ್ನು ಕೈಕೊಂಡಾಗ ಊರ್ಮಿಳೆ ಅಯೋಧ್ಯೆಯಲ್ಲೇ ಉಳಿಯುತ್ತಾಳೆ. ಪತಿ ವಿರಹದಿಂದ ಅವಳು ಪಟ್ಟ ಪಾಡೇನು, ಮುಂದೆ ಅವಳಿಗೆ ಏನಾಯಿತು ಎಂಬ ವಿವರಗಳು ವಾಲ್ಮೀಕಿಯ ರಾಮಾಯಣದಲ್ಲಿ ಬರುವುದಿಲ್ಲ.

	ಕವಿ ರವೀಂದ್ರನು ಕಾವ್ಯದ ಅನಾದರ ಎಂಬ ತಮ್ಮೊಂದು ವಿಮರ್ಶೆಯಲ್ಲಿ ಊರ್ಮಿಳೆಯ ಬಗ್ಗೆ ಸಹಾನುಭೂತಿಯಿಂದ ಬರೆದಿದ್ದಾರೆ. ಉಷೋದಯದ ಪೂರ್ವದಿಗಂತದಲ್ಲಿ ಮೂಡುವ ತಾರೆ ಸೂರ್ಯೋದಯಾನಂತರದ ತುಂಬು ಬೆಳಕಿನಲ್ಲಿ ಮುಳುಗಿಹೋಗುವಂತೆ, ಸೀತಾದೇವಿಯ ಕಣ್ಣೀರಿನಲ್ಲಿ ಊರ್ಮಿಳಾದೇವಿ ಸಂಪೂರ್ಣವಾಗಿ ಕೊಚ್ಚಿಹೋದಳೆಂದು ನಿಟ್ಟುಸಿರಿಟ್ಟಿದ್ದಾರೆ. ವಾಲ್ಮೀಕಿ ಮಹಾಕವಿ ತನ್ನ ಕಲ್ಪನಾಶಕ್ತಿಯ ಕರುಣಜಲವೆಲ್ಲವನ್ನೂ ಸೀತಾದೇವಿಯ ಪುಣ್ಯಾಭಿಷೇಕದಲ್ಲಿಯೇ ಮುಗಿಸಿಬಿಟ್ಟಿದ್ದಾನೆ. ಕಳೆಗುಂದಿದ ಮುಖವುಳ್ಳವಳೂ ಸಮಸ್ತ ಐಹಿಕ ಸುಖದಿಂದ ವಂಚಿತಳೂ ಆಗಿ ಸೀತಾದೇವಿಯ ಛಾಯೆಯಲ್ಲಿ ಅವಕುಂಠನವತಿಯಾಗಿ ನಿಂತಿರುವ ಮತ್ತೊಬ್ಬ ರಾಜಕುಮಾರಿಯ ಚಿರದುಃಖದಿಂದ ತಪ್ತವಾದ ನಮ್ರಲವಾಟದ ಮೇಲೆ ತನ್ನ ಕಮಂಡಲುವಿನ ಒಂದು ತೊಟ್ಟು ನೀರನ್ನೂ ಚಿಮುಕಿಸಿಲ್ಲವಲ್ಲ-ಎಂದು ಉದ್ಗಾರಗೊಳ್ಳುತ್ತಾರೆ. ಅನಂತರ ಆಧುನಿಕ ಭಾರತೀಯ ಸಾಹಿತ್ಯದಲ್ಲಿ ಊರ್ಮಿಳೋದಯವಾಗುತ್ತದೆ. ಉತ್ತರದ ಹಿಂದೀ ಕವಿಗಳಲ್ಲಿ ಮೈಥಿಲೀಶರಣಗುಪ್ತರು, ಬಾಲಕೃಷ್ಣವರ್ಮರು ಊರ್ಮಿಳಾ ಕಾವ್ಯಗಳನ್ನೇ ರಚಿಸಿದರೆ, ದಕ್ಷಿಣದಲ್ಲಿ ಭಾರತಿ ಅವರು ತಪಸ್ವಿನೀ ಎಂಬ ನಾಟಕವನ್ನೂ ಪು.ತಿ.ನ. ಅವರು ಬೀಳ್ಕೊಡಿಗೆ ಎಂಬ ಕಿರುನಾಟಕವನ್ನೂ ಕೀರ್ತಿನಾಥ ಕುರ್ತುಕೋಟಿಯವರು ಊರ್ಮಿಳಾ ಭಾವಗೀತವನ್ನೂ ಬರೆದಿದ್ದಾರೆ. ಕುವೆಂಪು ಅವರು ಆಕೆಯನ್ನು ಕುರಿತು ಅಷ್ಟಷಟ್ಪದಿಯ ಕುಸುಮಾಂಜಲಿ ನೀಡಿದರೇ ಹೊರತು ಪ್ರತ್ಯೇಕ ಕಾವ್ಯವನ್ನೇ ರಚಿಸುವ ಗೋಜಿಗೆ ಹೋಗಲಿಲ್ಲ. ಶ್ರೀರಾಮಾಯಣದಲ್ಲಿ ಈ ಮಹಾಸತಿಯ ಪಾತ್ರವೆಂಥದು ಎಂಬುದರ ಸ್ಪಷ್ಟ ದರ್ಶನವಿರುವ ಈ ಕವಿ ತಮ್ಮ ಶ್ರೀರಾಮಾಯಣದರ್ಶನಂ ಮಹಾಕಾವ್ಯದಲ್ಲಾದರೂ ಈಕೆಯನ್ನು ತೋರುವುದು ಕಡೆಯಲ್ಲಿ ಒಮ್ಮೆ ಮಾತ್ರವೇ. ಪರೋಕ್ಷವಾಗಿ ಊರ್ಮಿಳೆಯ ಚಿತ್ರ ಇನ್ನೆರಡು ಮೂರು ಬಾರಿ ಮಾತ್ರ ಸುಳಿದರೂ ಆಕೆಯ ಅದೃಶ್ಯ ತೇಜಃಪುಂಜದಿಂದ ಇಡೀ ಕಾವ್ಯದ ಘಟನೆಯೆಲ್ಲ ಮಿಂದು ಕಾಂತವಾಗುತ್ತದೆ. ಊರ್ಮಿಳಾ ಲಕ್ಷ್ಮಣರ ಅನರುಕ್ತ ತ್ಯಾಗದ ಮಹಿಮೆಯನ್ನು ಸೀತಾರಾಮರು ಕಲ್ದವಸಿಯ ಮೂಲಕ ತಿಳಿದು ತಮ್ಮ ಜೀವನ ಸಂಯಮವನ್ನು ಜಾಗೃತಗೊಳಿಸಿಕೊಳ್ಳುವ ಪ್ರಸಂಗವಾಗಲಿ, (ಶ್ರೀರಾಮಾಯಣದರ್ಶನಂ-ಕುಣಿದಳುರಿಯ ಊರ್ವಶಿ) ಅಯೋಧ್ಯೆಗೆ ಹಿಂತಿರುಗಿದ ಸೀತಾರಾಮ ಲಕ್ಷ್ಮಣರನ್ನು ದೂರದಿಂದ ಸ್ವಾಗತಿಸಲು ತನ್ನ ತಪೋವನದ ತವರನ್ನುಳಿದು ಮಿಂದು ಮಡಿಯುಡಲು ಹೊರಟ ಊರ್ಮಿಳೆ ತಂಗಿ ಮಾಂಡವಿಗೆ ಚಿಃ ! ಕಡಲ್ಗಿಗರ್ ಪನಿಗೇಂ ಪ್ರದರ್ಶನಂ? ದೇವರ ತಪಕ್ಕಿದಿರ್ ನಮ್ಮದೊರ್ ತೃಣಮಲ್ತೆ; ಸಂತೋಷ ಸಮಯದೊಳ್ ತೋರ್ಪುದನ್ಮಚಿತವೆಮ್ಮ ಕಷ್ಟಮಂ; ತನ್ನ ತಾನು ಇಲ್ಲಗೈವುದೆ ಎಲ್ಲ ಸಾಧನೆಗೆ ಕೊನೆಯ ಗುರಿ; ಮೇಣ್‍ತಪಕ್ಕೆ ಕೇಳ್, ತಂಗೆ, ಪರಮಪ್ರಯೋಜನಂ! ಎಂದು ನುಡಿಯುವ ಪ್ರಸಂಗವಾಗಲಿ, ಊರ್ಮಿಳಾದೇವಿಯನ್ನು ದೇವತಾಪ್ರತಿಮೆಯಾಗಿ ಮೂರ್ತೀಭವಿಸುವಲ್ಲಿ ಯಶಸ್ವಿಯಾಗುವಂತೆ ಯಾವ ಪ್ರತ್ಯೇಕ ಸಮಗ್ರ ಕಾವ್ಯವೂ ಆಗದಿರಬಹುದು. ಸಂಯಮ ತಪಸ್ಸಿನ ಮಹಿಮಾಜ್ಯೋತಿಯಾದ ಊರ್ಮಿಳೆಯ ಪಾತ್ರವೈಭವ ಧ್ವನಿವ್ಯಂಜಿತವಾಗುವಂತೆ ವಿಸ್ತøತವರ್ಣನೆಯಿಂದಾಗದು. ಮೌನವನ್ನು ಮಾತಿನಿಂದ, ಸಂಯಮವನ್ನು ದುಂದುಗಾರಿಕೆಯಿಂದ ಸಾಧಿಸುವುದಾದರೂ ಹೇಗೆ? ಊರ್ಮಿಳಾ ಪಾತ್ರದ ಮಹತ್ತೇನಿದ್ದರೂ ರಾಮಾಯಣ ಮಹಾಗೀತದಲ್ಲಿ ಶ್ರುತಿಯಂತೆ ಅಶ್ರುತವಾಗಿರುವುದರಲ್ಲಿಯೆ ಹೊರತು, ಆಕೆಯನ್ನೇ ಮುನ್ನೆಲೆಯ ಗಾನವನ್ನಾಗಿ ಮಾಡಿ ಉಳಿದ ವಾದ್ಯಮೇಳವನ್ನು ಮುಳುಗಿಸುವುದರಲ್ಲಿಲ್ಲ. ಈ ದೃಷ್ಟಿಯಿಂದ ಶ್ರೀ ಕುವೆಂಪು ಅವರ ಸೃಷ್ಟಿ ಅನನ್ಯ ಶ್ರೇಷ್ಠವಾದುದು.

	ಊರ್ಮಿಳೆ ತಪಸ್ವಿನಿಯೆ ಆಗಬೇಕೆ? ಬರಿಯ ವಿರಹಿಣಿಯೇಕಾಗಬಾರದು? ಎಂಬುದಕ್ಕೆ ವಾಲ್ಮೀಕಿಗಳೇ ಸೂಚ್ಯ ಉತ್ತರವಿತ್ತಿದ್ದಾರೆ. ಜಾನಪದ ಕಥೆಗಳೂ ಈಕೆಯನ್ನು ತಪಸ್ವಿನಿಯನ್ನಾಗಿಯೆ ಕಲ್ಪಿಸಿದೆ. ಒಂದು ಕಥೆಯ ಪ್ರಕಾರ, ಊರ್ಮಿಳೆ ಲಕ್ಷ್ಮಣನಿಗಾಗಿ ಬಿಸಿನೀರು ಹಿಡಿದು ಬಾಗಿಲಿಗೆ ಬಂದವಳು ರಾಮ ವನವಾಸದ ಸುದ್ದಿ ತಿಳಿದು ಹಾಗೆಯೇ ಅಲ್ಲೇ ಪತಿಯ ಆಗಮನಕ್ಕಾಗಿ ಕಾದು ನಿಲ್ಲುತ್ತಾಳೆ. ವನವಾಸದಿಂದ ಬಂದ ಪತಿಯ ಕಾಲಿಗೆ ಅದೇ ತಂಬಿಗೆಯ ಬಿಸಿ ನೀರೆರೆದು ಎದುರುಗೊಳ್ಳುತ್ತಾಳೆ. ಮತ್ತೊಂದು ಕಥೆಯ ಪ್ರಕಾರ, ಆಕೆ ವನವಾಸ ವಾರ್ತೆ ತಿಳಿದಾಗ ಸ್ನಾನ ಮಾಡುತ್ತಿರುತ್ತಾಳೆ. ಪತಿ ಹಿಂಬರುವ ತನಕ ಅಲ್ಲೆ ಒದ್ದೆ ಮಡಿಯಲ್ಲಿರುತ್ತಾಳೆ. ವಾಸ್ತವವಾಗಿಯೂ ಅವಳು ಗೃಹತಪಸ್ವಿನಿಯೆ.							
(ಎಸ್.ಎನ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ